Skip to content
Bruhacharana Roots
ಬೃಹಚ್ಚರಣ ಹಿನ್ನಲೆ
ತಂಜಾವೂರು ಪ್ರಾಂತ್ಯದ ಮಂಜಪತ್ತೂರು ನಮ್ಮವರ ಮೂಲ ಸ್ಥಳ. ಅಲ್ಲಿ ನಮ್ಮ ಸಮುದಾಯದವರು ಜೀವನೋಪಾಯಕ್ಕಾಗಿ ಶಿಕ್ಷಕ, ಶ್ಯಾನುಭೋಗ, ಪೌರೋಹಿತ್ಯ ವೃತ್ತಿಗಳಲ್ಲಿ ನಿರತರಾಗಿರುತ್ತಿದ್ದರಂತೆ. ಕಾರಣಾಂತರಗಳಿಂದ, ಅಲ್ಲಿಂದ ಜನರು ಸುಮಾರು 600 ವರ್ಷಗಳ ಹಿಂದೆ ಆಗಿನ ಮೈಸೂರು ಸ೦ಸ್ಥಾನದ ಕಡೆ ವಲಸೆ ಬಂದರೆಂದು ತಿಳಿದುಬಂದಿದೆ. ಹೀಗೆ ಹೊರಟುಬ೦ದವರು ಈಗಿನ ಬೆ೦ಗಳೂರು ಗ್ರಾಮಾ೦ತರ ಪ್ರದೇಶ ಹಾಗೂ ಕೋಲಾರ ಜಿಲ್ಲೆಗಳ ಸ್ಥಳಗಳಾದ ದೇವನಹಳ್ಳಿ, ಕಿತ್ತಿಗಾನಹಳ್ಳಿ, ತಟ್ಟನಹಳ್ಳಿ, ಶೆಟ್ಟಹಳ್ಳಿ, ಮಟ್ಟನಹಳ್ಳಿ, ಕಾಮನಹಳ್ಳಿ, ಬೈಯಪ್ಪನಹಳ್ಳಿ, ಜಡಿಗೇನಹಳ್ಳಿ, ಬ್ಯಾಗಡದೇನಹಳ್ಳಿ, ತ್ಯಾವಕನಹಳ್ಳಿ, ಬಂಡಕೊಡಗನಹಳ್ಳಿ, ರಾಚಮಾನಹಳ್ಳಿ, ನಲ್ಲಾಲು, ಕೂಗೂರು, ಮರಸೂರು, ಸಂಮ್ಮಂದೂರು, ಯಮಲೂರು, ಗುಂಜೂರು, ಮುಗಳೂರು, ಅಡೆಸನ್ನಟ್ಟಿ, ರಾಜಾಪುರ, ಆನೇಕಲ್, ಕೋಲಾರ ಕಬ್ಬನ್ ಪೇಟೆ, ಸರ್ಜಾಪುರ, ಹಲಸೂರು, ಪ್ಯಾಲೇಸ್ ಗುಟ್ಟಹಳ್ಳಿ, ಕೊತ್ತಕೊಂಡಳ್ಳಿ, ಕಾಚರಕನಹಳ್ಳಿ, ಗುಮ್ಮಳಾಪುರ, ಬಿನ್ನಮಂಗಲ, ಗೆರಟಿಗನಬೆಲೆ, ಅಟ್ಟೂರು, ಹೊಸಕೋಟೆ, ಸೋಮತ್ತನಹಳ್ಳಿ, ಜಕ್ಕೂರು, ಹಿನ್ನಕ್ಕಿ, ರಾಮಕೃಷ್ಣಾಪುರ, ನಡವತ್ತಿ, ಬೂದುಗೆರೆ, ಹಸಿಗಾಳ, ಚೂಡಸಂದ್ರ, ಬಿಲ್ಲಾಪುರ, ಜಗದೇಪುರ, ಶಾವಕನಹಳ್ಳಿ, ಯಲಹಂಕ, ಶಿಡ್ಲಘಟ್ಟ, ಬಳೇಪೇಟೆ, ಮಾವಳ್ಳಿ, ಅಕ್ಕಿತಿಮ್ಮನಹಳ್ಳಿ, ಮಾರೇನಹಳ್ಳಿ, ಅಲಸೂರುಪೇಟೆ, ಇಮ್ಮಡಹಳ್ಳಿ, ಮಾಮೂಲುಪೇಟೆ, ಇಟ್ಟಂಗೂರು, ನಾಗವಾರಪಾಳ್ಯ, ಸಣ್ಣ ಸೇಲಂ (ಶಾಲ್ಯ), ಥಳಿಕೊತ್ತನೂರು, ಬೆಟ್ಟಕೋಟೆ, ಅರೆಹಳ್ಳಿ, ತಿಂಡ್ಲು ಮತ್ತು ಮುಂತಾದವು. ಕಾಲಕ್ರಮೇಣ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೆಲೆಸಿ ಜೀವನ ನಡೆಸುತ್ತಾ ತಮ್ಮದೇ ಆದ ಭಾಷೆ ಬಿಟ್ಟು ತಮ್ಮಜೀವನಕ್ಕೆ ಆಧಾರವಾದ ಕನ್ನಡವನ್ನು ಮಾತೃಭಾಷೆಯನ್ನಾಗಿಸಿಕೊಂಡರು. ಕನ್ನಡ ತಮಿಳಿನ ಮಿಶ್ರಿತವಾದ ನಮ್ಮ ಭಾಷೆ ಮಲೆಯಾಳಿಯ ಛಾಯೆಯು ಸೇರಿ ದ್ರಾವಿಡ ಶೈಲಿಯಲ್ಲಿದೆ. ನಮ್ಮ ಭಾಷೆಗೆ ಲಿಪಿ ಇಲ್ಲದ ಕಾರಣ ಯುವ ಪೀಳಿಗೆಯು ಪರಿಸರದಲ್ಲಿದ್ದ ಕನ್ನಡ ಭಾಷೆಯತ್ತ ಒಲುಮೆ ತೋರಿತು.
ಬೃಹಚ್ಚರಣದ ಬಗ್ಗೆ ಹಲವು ಹಿರಿಯರು ಸಂಶೋಧಿಸಿ ತಮ್ಮ ತಮ್ಮ ಅನಿಸಿಕೆಗಳನ್ನು ಬರೆದಿಟ್ಟಿರುತ್ತಾರೆ. ಬೃಹಚ್ಚರಣರು ತಮಿಳು ಸ್ಮಾರ್ತ ಬ್ರಾಹ್ಮಣರಾಗಿದ್ದು ಆದಿಗುರು ಶ್ರೀ ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವ್ಯೆತ ಸಿದ್ಧಾಂತವನ್ನು ಪಾಲಿಸುತ್ತಿದ್ದಾರೆ. ನಮ್ಮ ಪ೦ಗಡದ ಅನೇಕರು ಚೋಳರ ರಾಜನಾದ ರಾಜರಾಜಚೋಳ, ರಾಜೇಂದ್ರಚೋಳನ ಆಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದರೆಂದು ತಿಳಿದು ಬಂದಿದೆ.
ಬೃಹಚ್ಚರಣರನ್ನು ಬೃಹದಾಚರಣರು ಎಂದು ಕರೆಯುತ್ತಿದ್ದರಂತೆ. ಬೃಹದಾಚರಣ ಎಂದರೆ ದೊಡ್ಡ, ದೊಡ್ಡ ಆಚಾರಗಳುಳ್ಳವರು ಎಂದರ್ಥ. ಕರ್ಮನಿಷ್ಠರು, ಯಜ್ಞಯಾಗಾದಿಗಳಲ್ಲಿ ಶ್ರದ್ಧೆಯುಳ್ಳವರೂ, ವೇದದಲ್ಲಿಯೂ, ಮೀಮಾಂಸಾದಿಶಾಸ್ತ್ರಗಳಲ್ಲಿಯೂ ಪಾರಂಗತವಾಗಿದ್ದವರು ಮತ್ತು ಗ್ರಂಥಗಳನ್ನುರಚಿಸಿರುವ೦ಥಹವರು. ಗುಮ್ಮಳಾಪುರದ ಬೃಹಚ್ಚರಣರ ವೆಂಕಟಶರ್ಮ ಎಂಬ ಮಹನೀಯನು ಕನ್ನಡ ಕವಿ ರುದ್ರಭಟ್ಟನ ಜಗನ್ನಾಥವಿಜಯ ಕಾವ್ಯಕ್ಕೆ ವ್ಯಾಖ್ಯಾನ ಬರೆದಿದ್ದಾನೆಂದು ಪ್ರಾಕ್ತನವಿಮರ್ಶ ವಿಚಕ್ಷಣ ಮಹಾಮಹೋಪಾಧ್ಯಾಯ ರಾ. ನರಸಿಂಹಚಾರ್ಯರು ತಿಳಿಸಿದ್ದಾರೆ.
ದಾರ್ಶನಿಕ ಮತ್ತು ಕನ್ನಡದ ಮೇರು ಸಾಹಿತಿಗಳಲ್ಲಿ ಒಬ್ಬರಾದ “ಶ್ರೀ ಡಿ.ವಿ.ಗುಂಡಪ್ಪನವರು” ನಮ್ಮ ಸಮುದಾಯದವರು ಎಂದು ತಿಳಿಸಲು ಹೆಮ್ಮೆಯಾಗುತ್ತದೆ.
ಸಮುದಾಯದವರೆಲ್ಲ ಒಟ್ಟಾಗಿ ಸೇರಲು ಕಾರ್ಯಕಾರಿ ಸಮಿತಿಯು ಕೆಲವು ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಅದರಲ್ಲಿ ಪ್ರಮುಖವಾದವುಗಳು ಹಿರಿಯ ಚೇತನರಿಗೆ ಗೌರವ ಸಮರ್ಪಣೆ, ಪ್ರತಿಭಾ ವಿದ್ಯಾರ್ಥಿಗಳಿಗೆ ಉತ್ತೇಜನ, ಪ್ರತಿ ವರ್ಷವೂ ಆನೇಕಲ್ ಸಮೀಪವಿರುವ ಕಿತ್ತಿಗಾನಹಳ್ಳಿಯಲ್ಲಿ ನಾಗಾರಾಧನೆ ಆಚರಣೆ, ರಥೋತ್ಸವ ಮತ್ತು ಶ್ರೀ ಶ್ರೀನಿವಾಸ ದೇವರ ಕಲ್ಯಾಣೋತ್ಸವ, ಸಮುದಾಯದ ಕುಟುಂಬದ ಸದಸ್ಯರಿಗಾಗಿ ಒಂದು ದಿನದ ಪ್ರವಾಸ, ಸಂಗೀತ ಕಾರ್ಯಕ್ರಮಗಳ ಆಯೋಜನೆ, ಶ್ರೀ ಶಂಕರ ಭಗವತ್ಪಾದರ ಜಯಂತಿ ಆಚರಣೆ, ಪ್ರತೀ ವರ್ಷ ಸರ್ವ ಸದಸ್ಯರ ಸಭೆ, ನಮ್ಮದೇ ಸಮುದಾಯದ ತ್ರೈಮಾಸಿಕ ಪತ್ರಿಕೆಯ ಪ್ರಕಟಣೆ ಮತ್ತು ಇನ್ನಿತರ ಕಾರ್ಯಕ್ರಮಗಳು. ಇದಲ್ಲದೆ ವಿಶೇಷವಾಗಿ ನಮ್ಮ ಸಮುದಾಯದ ಸದಸ್ಯರ ಉದಾರ ಮನೋಭಾವದಿಂದಾಗಿ ಇಡೀ ಬ್ರಾಹ್ಮಣ ಸಮುದಾಯದ ಪ್ರಯೋಜನಕ್ಕಾಗಿ 28 ಅಕ್ಟೋಬರ್ 2018ರಂದು ಒ೦ದು ನೂತನ “ವೈಕುಂಠ ವಾಹನ” ವನ್ನು“ಆರ್ಯಾವರ್ತ” ಸಂಸ್ಥೆಗೆ ಹೃತ್ಪೂರ್ವಕ ನೀಡಿಕೆ.
ಇಂದು ನಮ್ಮ ಸಂಘದಲ್ಲಿ 500ಕ್ಕೂ ಹೆಚ್ಚು ಸದಸ್ಯರಿದ್ದಾರೆ ಎಂದು ತಿಳಿಸಲು ಹರ್ಷಿಸುತ್ತೇವೆ. ಮು೦ಬರುವ ವರುಷಗಳಲ್ಲಿ ಸ೦ಘವನ್ನು ಸ೦ಖ್ಯಾಬಲದಲ್ಲಿಯೂ, ಗುಣಾತ್ಮಕವಾಗಿಯೂ ಬೆಳೆಸಬಹುದೆ೦ಬ ಎ೦ಬ ವಿಶ್ವಾಸ ನಮಗಿದೆ.
EditAbout MMDBS