ಋಷಿಗಳ ಜೀವನ ಚರಿತ್ರೆ ಮತ್ತು ಉಪದೇಶಗಳಿಂದ ಭಾರತೀಯ ಸಂಸ್ಕೃತಿಗೂ ಋಷಿಗಳಿಗೂ ಇರುವ ಪರಸ್ಪರ ಬಾಂಧವ್ಯದ ಪರಿಚಯವಾಗುತ್ತದೆ. ಭಾರತೀಯ ಸಂಸ್ಕೃತಿ ಪಥವನ್ನು ಗೊತ್ತು ಮಾಡಿದವರು ಅವರೇ; ಪ್ರಬಲವಾದ ರಾಜಧರ್ಮವನ್ನು ರಚಿಸಿ, ಅದನ್ನು ಇಂದಿನವರೆಗೂ ನಡೆಸಿಕೊಂಡು ಬಂದಿರುವವರು ಅವರೇ. ವಿಶ್ವದ ದಿವ್ಯಮೂಲಾಧಾರವಾವುದೆಂಬುದನ್ನೂ, ದೈವಾಧೀನವಾದ ವಿಶ್ವದ ಬೆಳವಣಿಗೆಯ ರೀತಿಯನ್ನೂ ಅವರು ವಿವರಿಸಿದ್ದಾರೆ. ದೈವ ಪ್ರತಿಬಿಂಬವಾಗಿಯಾಗಲಿ, ದೈವಾಂಶವಾಗಿಯಾಗಲಿ, ದೈವರೂಪಿಯಾಗಿಯಾಗಲಿ ಅಥವಾ ದೈವದಲ್ಲಿ ಲೀನವಾಗಿಯಾಗಲಿ ಇರುವ ಆತ್ಮ ದಿವ್ಯವಾದುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅವರು ಕರ್ಮಯೋಗವನ್ನು ಆತ್ಮದ ಮುಕ್ತಿಮಾರ್ಗವನ್ನೂ ಬೋಧಿಸಿದ್ದಾರೆ. ಅವರು ಆಶಾವಾದಿಗಳು, ನಿರಾಶಾವಾದಿಗಳಲ್ಲ. ಸ್ವಾವಲಂಬನ ಮತ್ತು ರಾಜಕೀಯ ಸ್ವಾತಂತ್ರ್ಯದ ಆಧಾರದ ಮೇಲೆ ಸ್ಥಿರವಾದ ಮತ್ತು ಸುಭದ್ರವಾದ ಸಮಾಜವನ್ನು ಕಟ್ಟಿದರು. ನೈತಿಕ ಪರಿಶುದ್ಧತೆ ಮತ್ತು ಶಿಷ್ಟಾಚಾರದೊಂದಿಗೆ ನೀತಿಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಅಧ್ಯಾತ್ಮವನ್ನೂ ಬೆಳಸಿಕೊಂಡು ಬಂದರು. ಅವರು ಆಶಿಸಿ, ಸಾಧಿಸಿಕೊಂಡ ವೈಯುಕ್ತಿಕ ಮತ್ತು ಸಾಮಾಜಿಕ ಜೀವನ ಇಂದಿಗೂ ಯಶಸ್ವಿಯಾಗಿ ಸಾಗುತ್ತಿದೆ.
ಭಗವದ್ಗೀತೆಯ ಈ ಒಂದು ಶ್ಲೋಕದಿಂದ ಋಷಿಗಳ ಜೀವನ ಮಹತ್ವವನ್ನು ನಾವು ಕಾಣುತ್ತೇವೆ.