Skip to content
Nagaradhane Origin
ಬೃಹಚ್ಚರಣರ ನಾಗಾರಾಧನೆಯ ಹಿನ್ನೆಲೆ
ನದಿಯ ಮೂಲ, ಋಷಿ ಮೂಲ, ಸ್ತ್ರೀ ಮೂಲಗಳನ್ನು ಹುಡುಕಬಾರದು ಎಂಬ ಆಡು ಮಾತಿದೆ. ಹಾಗೇಯೆ ಸಮಾಜದಲ್ಲಿ ಅನೇಕ ಸಮುದಾಯ, ಕುಟುಂಬಗಳಲ್ಲಿನ ತಲಮಾರುಗಳಿಂದ ಆಚರಿಸಿಕೊಂಡು ಬರುವ ಪದ್ದತಿಗಳು, ವಿವಿಧ ದೇವತಾ ಆರಾಧನೆ, ಆಚರಣೆಗಳ ಬಗ್ಗೆ ಪ್ರಮಾಣ ಪಡಿಸುವ ದಾಖಲೆಗಳು, ಶಾಸನಗಳು ಇಲ್ಲ ಎಂಬ ಕಾರಣದಿಂದ ಅವುಗಳ ಮೂಲವನ್ನು ಕೆದಕುವ ಕೆಲಸ ಅನವಶ್ಯಕ. ಆದರೆ ನಮ್ಮ ಹಿಂದಿನ ತಲೆಮಾರಿನವರು ಆಚರಿಸಿಕೊಂಡು ಬರುತ್ತಿದ್ದ ಕೆಲವು ದೇವತಾ ಆಚರಣೆ, ಪದ್ದತಿಗಳನ್ನು ನಾವೂ ಮುಂದುವರೆಸಿಕೊಂಡು ಹೋಗುವುದರಿಂದ ನಮಗೆ ನಷ್ಟವೇನೂ ಇಲ್ಲ. ಬದಲಿಗೆ ದೇವತಾ ಆಚರಣೆಗಳಿಂದ ಕುಟುಂಬದ ಸದಸ್ಯರ ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆತೀತು.
ಇಲ್ಲಿ ಮುಖ್ಯವಾಗಿ ಶತಮಾನಗಳ ಹಿಂದಿನ ಕಾಲದಲ್ಲಿ, ಇಂದಿನಂತೆ ಅಂಚೆಯ ಮೂಲಕ ಪತ್ರ ವ್ಯವಹಾರ, ದೂರವಾಣಿ, ಮೊಬೈಲ್ ಇಲ್ಲದ ಮತ್ತು ಮತ್ತಾವುದೇ ವಿಚಾರ ವಿನಿಮಯ ಮಾಡಿಕೊಳ್ಳಲು ಇತರೆ ಮಾರ್ಗಗಳಿಲ್ಲದ ಕಾಲದಲ್ಲಿ, ತಮ್ಮ ವಿಚಾರ ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ಇದ್ದ ಏಕೈಕ ಮಾರ್ಗ ಮುಖಾಮುಖಿ ಭೇಟಿಯೊಂದೆ. ಹಾಗಾಗಿ, ಇಂತಹ ಸಮುದಾಯಗಳ ಅಥವಾ ಕುಟುಂಬಗಳಿಗೆ ಸೀಮಿತವಾದ ಆಚರಣೆಗಳ ವೇಳೆಯಲ್ಲಿ ತಮ್ಮ ಬಂಧು ಭಾಂಧವರನ್ನು ಒಟ್ಟಾಗಿ ಭೇಟಿಯಾಗಲು ಅವಕಾಶವೂ ದೊರೆತಂತಾಗುತ್ತಿತ್ತು. ನಮ್ಮ ‘ಬೃಹಚ್ಚರಣ’ ಸಮುದಾಯದ ಕೆಲವು ಕುಟುಂಬದವರು ತಲಮಾರುಗಳಿಂದ ಆಚರಿಸಿಕೊಂಡು ಬರುತ್ತಿರುವ ದೇವತಾ ಆಚರಣೆಯು “ನಾಗಾರಾಧನೆ”. ಪ್ರತಿವರ್ಷ ಫಾಲ್ಗುಣ ಮಾಸದ ಶುದ್ಧ ಪಂಚಮಿಯಂದು ಕಿತ್ತಿಗಾನಹಳ್ಳಿಯ ನಾಗೇಶ್ವರ ಕ್ಷೇತ್ರದಲ್ಲಿ ‘ನಾಗಪ್ಪನಿಗೆ’ ತನಿ ಎರೆಯುವ ಸಾಂಪ್ರದಾಯಿಕ ಪದ್ದತಿ ಶತಮಾನಗಳಿಂದ ಮುಂದುವರೆಯುತ್ತಿರುವುದು ಒಂದು ವಿಶೇಷವೇ ಸರಿ.
ನಾಗಾರಾಧನೆ ಆಚರಣೆಯ ಮೂಲ ಹಿನ್ನೆಲೆ
ಕಿತ್ತಿಗಾನಹಳ್ಳಿಯ ನಾಗಾರಾಧನೆಯ ಪ್ರಾರಂಭದ ಕಾಲಮಾನ ಎಂದಿನದು, ಯಾವಾಗಿನಿಂದ ಎಂಬ ಬಗ್ಗೆ ನಮ್ಮಲ್ಲಿ ನಿಖರವಾದ ಮಾಹಿತಿ ಇಲ್ಲ. ಇದು ಕೇವಲ ತಲೆಮಾರುಗಳಿಂದ ಅನುವಂಶೀಯವಾಗಿ, ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ಆಚರಣೆ.
ಒಂದು ಅಂದಾಜಿನ ಪ್ರಕಾರ ಸುಮಾರು ಏಳನೂರು ವರ್ಷಗಳ ಹಿಂದೆ ತಮಿಳುನಾಡಿನ ಮಂಜಪತ್ತೂರು ಪ್ರಾಂತ್ಯದಿಂದ ಕಿತ್ತಿಗಾನಹಳ್ಳಿಗೆ ವಲಸೆ ಬಂದ ಬೃಹಚ್ಚರಣ ಸಮುದಾಯದ ಸಂಪ್ರದಾಯಸ್ಥ ಕುಟುಂಬ ಇಲ್ಲಿ ನೆಲೆಯೂರಿತು.
ಆ ಬ್ರಾಹ್ಮಣ ದಂಪತಿಗಳಿಗೆ ಸಂತಾನ ಪ್ರಾಪ್ತಿಯಾಗಿರಲಿಲ್ಲ. ಹಿರಿಯ ಪಂಡಿತರ ‘ನಾಗ ಪ್ರತಿಷ್ಠೆ’ ಮಾಡಿದಲ್ಲಿ ಸಂತಾನ ಪ್ರಾಪ್ತಿಯಾದೀತು ಎಂಬ ಸಲಹೆಯಂತೆ ನಾಗ ಪ್ರತಿಷ್ಠೆ ಮಾಡಿದ ನಂತರ, ಆ ಬ್ರಾಹ್ಮಣನ ಪತ್ನಿ ಗರ್ಭವತಿಯಾಗಿ, ನವಮಾಸಗಳು ತುಂಬಿದ ಬಳಿಕ ಅವಳಿ ಜವಳಿ ಮಕ್ಕಳಿಗೆ ಜನ್ನ ಕೊಟ್ಟಳು. ವಿಶೇಷವೋ ವಿಪರ್ಯಾಸವೋ ಎನ್ನುವಂತೆ ಅವಳಿ ಜವಳಿ ಮಕ್ಕಳಲ್ಲಿ ಒಂದು ಮಗುವು ಬಹುತೇಕ ಸರ್ಪದ ಆಕಾರದಲ್ಲಿ ಜನಿಸಿತ್ತು.
ಕೆಲವು ಕಾಲದ ನಂತರ, ಪ್ರಾಪ್ತ ಸಮಯದಲ್ಲಿ ಆ ಅವಳಿ ಜವಳಿಯ ಗಂಡು ಮಗುವಿಗೆ ಉಪನಯನ ಕಾರ್ಯಕ್ಕೆ ಸಿದ್ದತೆ ನಡೆದು, ಉಪನಯನದ ಮುಹೂರ್ತವು ಪಾಲ್ಗುಣ ಶುಧ್ಧ ಪಂಚಮಿಯ ದಿನವಾಗಿತ್ತು. ಅಂದು, ಆ ದಂಪತಿಗಳು ತಮ್ಮ ಆ ಸರ್ಪದ ಆಕಾರದ ಮತ್ತೊಂದು ಮಗುವನ್ನು ಉಪನಯನ ಕಾರ್ಯಕ್ಕೆ ಬಂದ ಅತಿಥಿಗಳು, ನೆಂಟರು, ಇಷ್ಟರು, ಬಂಧುಗಳು ನೋಡಿದಾಗ ಭಯಪಡಬಹುದೆ, ಎಂದು ಆಲೋಚಿಸಿ, ಆ ಮಗುವನ್ನು ಭೋಜನ ತಯಾರಿಸುವ ಪಾಕಶಾಲೆ (ದನದ ಕೊಟ್ಟಿಗೆ)ಯ ಒಂದು ಮಗ್ಗುಲಲ್ಲಿ ಮಲಗಿರಲು ಹೇಳಿದರು. ತಂದೆ ತಾಯಂದಿರ ಮಾತಿನಂತೆ ಅದು ಒಂದು ಮೂಲೆಯಲ್ಲಿ ಗುಂಡಾಗಿ ಸುತ್ತಿಕೊಂಡು ಮಲಗಿತು.
ಉಪನಯನದ ಕಾರ್ಯಕ್ರಮಗಳು ಮುಂದು ವರೆದಿದ್ದವು. ಭೋಜನ ತಯಾರಿಸುವ ಬಾಣಸಿಗರು ತಮ್ಮ ಪಾಡಿಗೆ ಖಾದ್ಯ ಪದಾರ್ಥಗಳನ್ನು ತಯಾರಿಸುವ ಕಾರ್ಯಗಳಲ್ಲಿ ತೊಡಗಿದ್ದರು.
ಆಗ ಅಲ್ಲೊಂದು ಅಚಾತುರ್ಯ ನಡೆದೇ ಹೋಯಿತು!
ಅತಿಥಿ ಸತ್ಕಾರ್ಯಕ್ಕಾಗಿ ಖಾದ್ಯ ಪದಾರ್ಥಗಳನ್ನು ತಯಾರಿಸುತ್ತಿದ್ದ ಬಾಣಸಿಗನು, ಕುದಿಯುತ್ತಿದ್ದ ಪಾಯಸದ ಪಾತ್ರೆಯನ್ನು ಕೆಳಗಿಳಿಸಿ ಅಲ್ಲಿ ಗುಂಡಾಗಿ ಸುತ್ತಿಕೊಂಡು ಮೂಲೆಯಲ್ಲಿ ಮಲಗಿದ್ದ ಆ ಸರ್ಪದ ಮೇಲೆ ಅರಿವಿಲ್ಲದೆ ಇಳಿಸಿಯೇಬಿಟ್ಟ. ಆ ಪಾಯಸದ ಪಾತ್ರೆಯ ಶಾಖದಿಂದ ಕೆಲವೇ ಕ್ಷಣಗಳಲ್ಲಿ ಆ ಸರ್ಪದ ಆಕಾರದ ಮಗುವು ಮೃತಪಟ್ಟಿತು.
ಉಪನಯನದ ಶುಭ ಕಾರ್ಯದ ಸಂಧರ್ಭದಲ್ಲಿ ಉಂಟಾದ ಆಕಸ್ಮಿಕ ಅವಗಢದಿಂದ ಶುಭ ಕಾರ್ಯದ ಮನೆಯು ಸೂತಕದ ಮನೆಯಾಯಿತು.
ಇದರಿಂದ ಮನನೊಂದ ಆ ದಂಪತಿಗಳು ತಮ್ಮ ದೋಷ ಪರಿಹಾರಕ್ಕಾಗಿ ಪಂಡಿತರ ಮಾರ್ಗದರ್ಶನದಂತೆ ಅಂದಿನಿಂದ ಪ್ರತಿ ವರ್ಷವೂ ಶ್ರಾದ್ಧ ಕರ್ಮಗಳ ವಿಧಿವಿಧಾನದಂತೆ ‘ನಾಗಾರಾಧನೆ’ ಆಚರಣೆಯು ಪ್ರಾರಂಭವಾಯಿತು ಎಂಬುದು ಪ್ರತೀತಿ.
ಆ ಬೃಹಚ್ಚರಣ ಸಂಪ್ರದಾಯಸ್ಥ ಕುಟುಂಬದವರು ಕೌಂಡಿನ್ಯ ಗೋತ್ರಕ್ಕೆ ಸೇರಿದವರಾದ್ದರಿಂದ, ಅವರ ಸಂತತಿಯವರು ತಮ್ಮನ್ನು ಹಾಗೂ ತಮ್ಮ ಮುಂದಿನ ಪರಿವಾರಗಳನ್ನು ಯಾವುದೇ ದೋಷಗಳು ಕಾಡದಿರಲಿ ಎಂಬ ಕಾರಣದಿಂದಾಗಿ ಈ ‘ನಾಗಾರಾಧನೆಯ’ ಆಚರಣೆಯನ್ನು ಇಂದಿಗೂ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದಾರೆ.
ನಾಗಾರಾಧನೆಯ ಆಚರಣೆಯ ಕ್ರಮ
ಪ್ರತಿ ವರ್ಷ ಪಾಲ್ಗುಣ ಮಾಸದ ಶುದ್ಧ ಪಂಚಮಿಯಂದು ಬೃಹಚ್ಚರಣ ಸಮುದಾಯದ ಕೆಲವು ಕುಟುಂಬದವರು ತಮ್ಮ ಹಿಂದಿನ ತಲೆಮಾರಿನವರ ಕುಟುಂಬದಲ್ಲಿ ಉಂಟಾದ ಆಕಸ್ಮಿಕ ‘ನಾಗರ ಹತ್ಯೆ’ ಯ ದೋಷದಿಂದ ಮುಕ್ತಿ ಪಡೆಯಲು ಕಿತ್ತಿಗಾನಹಳ್ಳಿಯ ನಾಗೇಶ್ವರ ಕ್ಷೇತ್ರದ ನಾಗಾರಾಧನೆಯಲ್ಲಿ ನಾಗಪ್ಪನಿಗೆ ‘ತನಿ’ ಎರೆಯುವ ಪದ್ದತಿಯುಂಟು.
ಆ ಕುಟುಂಬಗಳವರು ಅಂದು ಶ್ರಾದ್ಧ ಕರ್ಮಗಳನ್ನು ಆಚರಿಸುವ ವಿಧಿವಿಧಾನಗಳಂತೆ ಉಪವಾಸವಿದ್ದು, ಶುಭ್ರವಾದ ಸಾಂಪ್ರದಾಯಿಕ ಉಡುಗೆಯಲ್ಲಿ , ಅನುಕೂಲವಾದಲ್ಲಿ ಒದ್ದೆ ಬಟ್ಟೆಯುಟ್ಟು ನಾಗಪ್ಪನಿಗೆ ನೀರು, ಅರಿಶಿನ, ಕುಂಕುಮ, ಹಸಿಯಾದ ಹಸುವಿನ ಹಾಲು, ಹೂವ್ವು, ಹಣ್ಣು ಮುಂತಾದ ಮಂಗಳ ದ್ರವ್ಯಗಳೊಂದಿಗೆ ತನಿ ಎರೆದು, ನಾಗಪ್ಪನಿಗೆ ವಸ್ತ್ರವನ್ನು ತೊಡಿಸಿ, ನಂತರ ಶುಚಿರ್ಭೂತನಾದ ವಟುವಿಗೆ ಕಾಲು ತೊಳೆದು ಆ ವಸ್ತ್ರವನ್ನು ನೀಡಿ, ಯಥಾಶಕ್ತಿ ದಕ್ಷಿಣೆ ನೀಡಿ ನಮಸ್ಕರಿಸಬೇಕು. ವಿಶೇಷವಾಗಿ ಅಂದು ಹುರಿಯದೆ ಇರುವ ಹಸಿಯಾದ ಕರಿಎಳ್ಳು, ಬೆಲ್ಲದಿಂದ ಮಾಡಿದ ‘ಚಿಗಳಿ’ ಉಂಡೆ, ತಂಬಿಟ್ಟು ನೈವೇದ್ಯ ಮಾಡುವುದು ಆಚರಣೆಯ ಕ್ರಮ.
ನಂತರ ಬಹುಪಾಲು ಶ್ರಾದ್ಧ ಕರ್ಮಗಳಲ್ಲಿ ಮಡಿಯಿಂದ ತಯಾರಿಸಲ್ಪಡುವ ಪದಾರ್ಥಗಳಾದ ಉದ್ದಿನ ವಡೆ, ಪಾಯಸ, ಗೊಜ್ಜು, ಪಲ್ಯಗಳನ್ನು ತಯಾರುಮಾಡಿ ಭೋಜನ ಮಾಡಬೇಕು. ಅಂದಿನ ರಾತ್ರಿಯಲ್ಲಿ ಲಘುವಾದ ಉಪಹಾರ ಸೇವಿಸಬೇಕು.
ನಾಗೇಶ್ವರ ಕ್ಷೇತ್ರದ ಅಶ್ವತ್ಥ ವೃಕ್ಷ
ತಲೆಮಾರುಗಳಿಂದ ಒಬ್ಬರಿಂದ ಮತ್ತೊಂದು ತಲೆಮಾರಿನವರಿಗೆ ಕೇವಲ ವಾಕ್ ಮೂಲಕ ಹಂಚಿಕೊಂಡ ಮಾಹಿತಿಯಂತೆ, ಈಗಿರುವ ಅಶ್ವತ್ಥ ಮರವನ್ನು ಮಂಜಪತ್ತೂರಿನಿಂದ ಕಿತ್ತಿಗಾನಹಳ್ಳಿಗೆ ಬಂದು ನೆಲೆಸಿದ ಆ ಬೃಹಚ್ಚರಣ ದಂಪತಿಗಳು ಪುತ್ರ ಸಂತಾನದ ಭಾಗ್ಯಕ್ಕಾಗಿ ‘ನಾಗ ಪ್ರತಿಷ್ಠೆ’ ಮಾಡಿದ ಸಮಯದಲ್ಲಿ ಅಶ್ವತ್ಥ ಗಿಡ ನೆಟ್ಟು ಬೆಳಸಿದ್ದು ಎಂಬುದಾಗಿ ತಿಳಿದುಬರುತ್ತದೆ. ಮರದ ಕಾಂಡದ ಗಾತ್ರವನ್ನು ಗಮನಿಸಿದಾಗ, ಅಂದಾಜಿನ ಪ್ರಕಾರವೂ ಅದು ನಿಜವಿರಬಹುದು ಎನಿಸುತ್ತದೆ. ಇಲ್ಲಿರುವ ಬೃಹದಾಕಾರದ ಮರದ ವಯಸ್ಸು ಎಷ್ಟಾಗಿರಬಹುದು ಎಂಬುದನ್ನು ವೈಜ್ಞಾನಿಕವಾದ ಲೆಕ್ಕವನ್ನು ಗಣನೆಗೆ ತೆಗೆದುಕೊಳ್ಳಲು ಭಾರತ ಸರ್ಕಾರದ “Institute of wood science technology, Malleswaram, Bangalore.” ಸಂಸ್ಥೆಯ ಪರಿಣಿತ ವಿಜ್ಞಾನಿಗಳಿಂದ ಅಧ್ಯಯನ ನಡೆಸಿ, ವರದಿ ಪಡೆದುಕೊಂಡಲ್ಲಿ, ಈ ಮರದ ಅಂದಾಜಿನ ವಯಸ್ಸು ತಿಳಿಯುವ ಸಾಧ್ಯತೆ ಇದೆ.
ಈ ಅಧ್ಯಯನದಿಂದ ನಮ್ಮ ಸಾಂಪ್ರದಾಯಿಕ ಆಚರಣೆಯಾದ ನಾಗಾರಾಧನೆಗೆ ಯಾವುದೇ ತೊಡಕು ಅಥವ ಗೊಂದಲ ಉಂಟಾಗದು. ಈ ಆಶ್ವತ್ಥ ಮರದ ಅಂದಾಜು ವಯಸ್ಸು ತಿಳಿಯುವುದರಿಂದ ನಾಗಾರಾಧನೆಯ ಪ್ರಾರಂಭದ ಕಾಲವು ನಮಗೆ ಸ್ಥೂಲವಾಗಿಯಾದರೂ ತಿಳಿದೀತು ಎಂಬುದಷ್ಟೇ ಈ ವೈಜ್ಞಾನಿಕ ಅಧ್ಯಯನದ ಪ್ರಮುಖ ಉದ್ದೇಶ.
ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕ್ರಮ ಕೈಗೊಂಡಲ್ಲಿ, ಸಮುದಾಯದವರಿಗೆ ನಾಗಾರಾಧನೆ ಆಚರಣೆಯ ಪ್ರಾರಂಭದ ಮೂಲದ ಮಾಹಿತಿ ದೊರಕಿದಂತಾದೀತು.
ಇನ್ನು ಇಲ್ಲಿನ ಅಶ್ವತ್ಥ ಕಟ್ಟೆಯ ಪೂರ್ವ ದಿಕ್ಕಿನಲ್ಲಿ ಇರುವ ಕಲ್ಲಿನಲ್ಲಿ ಕೆತ್ತಿರುವ ಫಲಕದಲ್ಲಿನ ಮಾಹಿತಿ ಹೀಗಿದೆ.
ಸ್ವಸ್ತಿ ಶ್ರೀ ಶಾಲಿವಾಹನಶಕ ೧೮೬೦ನೆಯ ಬಹುಧಾನ್ಯ ಸಂ||ಮಾಘ ಬ||೫ ಬುಧವಾರ ಶ್ರೀಮಾನ್ ದಿವಂಗತ (ಸಬ್ ಜಡ್ಜಿ) ಕಾಚರಕನಹಳ್ಳಿಯ “ಲಕ್ಷ್ಮೀನಾರಾಯಣಯ್ಯ” ನವರ ಜ್ಞಾಪಕಾರ್ಥವಾಗಿ ಅವರ ಕುಮಾರರು ಪದ್ಮನಾಭಯ್ಯನವರು ಕಟ್ಟಿಸಿ ಪುನಃ ಪ್ರತಿಷ್ಠೆ ಮಾಡಿಸಿದ ಈ ಅಶ್ವತ್ಥ ನಾಗರ ಕಟ್ಟೆ. ಶ್ರೀ ನಾಗೇಶ್ವರ ಪರಬ್ರಹ್ಮ ಪ್ರೀತಿಕರವಾಗಿ ಇಲ್ಲಿನ ಫಲಕದಲ್ಲಿ ನಮೂದಿಸಿರುವ ಶಾಲಿವಾಹನಶಕ ಸಂವತ್ಸರದ ತೇದಿಯನ್ನು English calendarಗೆ ತರ್ಜುಮೆ, ಪರಿವರ್ತಿಸಿದಾಗ ಸಿಗುವ ದಿನಾಂಕ 25.01.1939 ಬುಧವಾರ ಅಂದರೆ ಇಸವಿ, 2021ಕ್ಕೆ ಸುಮಾರು 83 ವರ್ಷಗಳ ಹಿಂದೆ ಪುನಃ ಪ್ರತಿಷ್ಠೆ ಮಾಡಿಸಿದ ದಾಖಲೆ ಇದೆ ಎಂದಾಯಿತು. ಇದಕ್ಕೆ ಹಿಂದೆ ಕೆಲವು ಬಾರಿ ಇಂತಹ ಪುನಃ ಪ್ರತಿಷ್ಠೆ ಕಾರ್ಯಗಳು ನಡೆದಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಇತ್ತೀಚೆಗೆ, ನಮ್ಮ ಬೃಹಚ್ಚರಣ ಸಂಘದ ವತಿಯಿಂದ 2011ನೇ ಇಸವಿಯಲ್ಲಿ ಭಾಗಶಃ ಶಿಥಿಲಗೊಂಡಿದ್ದ ‘ನಾಗರ ಕಟ್ಟೆಯ’ ಪುನಃ ಜೀರ್ಣೋದ್ಧಾರ, ವಿಗ್ರಹಗಳ ಪುನಃ ಪ್ರತಿಷ್ಠೆಯ ಕಾರ್ಯವನ್ನು ಕೈಗೆತ್ತಿಕೊಂಡು ಸಮರ್ಪಕವಾಗಿ ನಿರ್ವಹಿಸಿಲಾಯಿತು. ಜೀರ್ಣೋದ್ಧಾರ ಕಾರ್ಯವು ಯಶಸ್ವಿಯಾಗಿ ನೆರವೇರಲು ಸಂಘದ ಎಲ್ಲ ಸದಸ್ಯರ ಸಹಕಾರ, ಸಹಯೋಗ, ಪ್ರೋತ್ಸಾಹವನ್ನು ಈ ಸಂಧರ್ಭದಲ್ಲಿ ಸ್ಮರಿಸಲಾಗಿದೆ.
ಈ ಮೇಲ್ಕಂಡ ಲೇಖನದ ಬಹುತೇಕ ಮಾಹಿತಿಯನ್ನು ಸಂಗ್ರಹಿಸಲು ಸಹಕಾರ ನೀಡಿದ ನಮ್ನ ಸಂಘದ ಸದಸ್ಯರು, ಹಾಗೂ ನಿಕಟಪೂರ್ವ ಕಾರ್ಯದರ್ಶಿಗಳಾದ ಕಿತ್ತಿಗಾನಹಳ್ಳಿಯ ವಿ.ಎಸ್. ಮಣಿ ಅವರಿಗೆ ಧನ್ಯವಾದಗಳನ್ನು ಈ ಮೂಲಕ ಅರ್ಪಿಸಿದ್ದೇನೆ.